ಕುರಂದ
 
(Al2O3) ರಚನೆ ಇರುವ ಮತ್ತು ಷಡ್ಭುಜಾಕೃತಿಯ ವ್ಯವಸ್ಥೆಯ ಹರಳುಗಳಾಗಿ ಸ್ಫಟಿಕೀಕರಿಸುವ ಒಂದು ಖನಿಜ (ಕೊರಂಡಂ). ಹರಳು ಸಾಧಾರಣವಾಗಿ ಪೀಪಾಯಿ ಆಕಾರದಲ್ಲಿ ಸಿಗುತ್ತದೆ. ಕೆಲವೆಡೆಗಳಲ್ಲಿ ಹರಳುರೂಪವಲ್ಲದ ತುಂಡುಗಳಂತೆಯೂ ಮುದ್ದೆಗಳಂತೆಯೂ ಸಿಗುವುದುಂಟು. 

ಕುರಂದ ವಿವಿಧ ವರ್ಣಗಳಲ್ಲಿ ಸಿಗುತ್ತದೆ; ಮುಖ್ಯವಾಗಿ ಕೆಂಪು, ಕಂದು, ನೀಲಿ, ಕಪ್ಪು, ಬೂದು ಹಸಿರು ಮತ್ತು ಬಿಳಿಯ ಬಣ್ಣಗಳಲ್ಲಿ ಇರುತ್ತದೆ. ಸಾಮಾನ್ಯವಾಗಿ ಮಂಕು ಮತ್ತು ಅಪಾರದರ್ಶಕ. ಆದರೆ ಹೊಸದಾಗಿ ಒಡೆದ ಬಿರುಕಿನ ಸಮತಲದಲ್ಲಿ ವಜ್ರದ ಪ್ರಕಾಶದಂತೆ ಹೊಳಪಿರುತ್ತದೆ. ಕೆಲವು ವರ್ಣರಂಜಿತ ಕುರಂದಗಳು ಪಾರದರ್ಶಕ  ಮತ್ತು ಮಿತಪಾರದರ್ಶಕ ರೂಪದಲ್ಲಿಯೂ ಸಿಗುವುದುಂಟು. ಕುರಂದ ಬಹಳ ಕಠಿಣ. ಮೋಮಾನದಲ್ಲಿ ಅದರ ಕಾಠಿಣ್ಯಾಂಕ 9. ಕಾಠಿಣ್ಯದಲ್ಲಿ ಇದು ವಜ್ರಕ್ಕೆ ಮಾತ್ರ ಎರಡನೆಯದಾಗಿದೆ. ಸಾಪೇಕ್ಷಸಾಂದ್ರತೆ 3.95 ರಿಂದ 4.1ರ ವರೆಗೆ. 

ರತ್ನದ ವೈವಿಧ್ಯವಿರುವ ಕುರಂದವನ್ನು ಅದರ ವರ್ಣದ ಮೇಲೆ ಅನೇಕ ಹೆಸರಿನಿಂದ ಕರೆಯುವುದುಂಟು. ನೀಲಿಬಣ್ಣದ ಕುರಂದವನ್ನು ನೀಲಿ ಎಂಬುದಾಗಿಯೂ ಹಳದಿಬಣ್ಣದ್ದನ್ನು ಗೋಮೇಧಿಕ ಎಂದೂ ಹಸಿರುಬಣ್ಣದ್ದನ್ನು ಪಚ್ಚೆ ಎಂದೂ ಕೆಂಪು ಬಣ್ಣದ್ದನ್ನು ಕೆಂಪು ಎಂದೂ ಕರೆದು ನವರತ್ನದ ಗುಂಪಿಗೆ ಸೇರಿಸಿದ್ದಾರೆ. ವರ್ಣ ರಂಜಿತವಾದ ಕುರಂದದ ರತ್ನಗಳಿಗೆ ಬಹಳ ಬೆಲೆ. 

ಕುರಂದದ ಉತ್ಪತ್ತಿ ಕ್ರಮವನ್ನು ಮೂರು ವಿಧವಾಗಿ ವಿಂಗಡಿಸಬಹುದು. 1 ಸಿಲಿಕರಹಿತವಾದ ಅಗ್ನಿ ಶಿಲೆಗಳಲ್ಲಿ ಸಂಚಯನವಾಗಿ ಸಯನೈಟ್ ನೆಫಿಲೀನ್ ಸಯನೈಟ್, ಪೆರಿಡೊಟೈಟ್ ಮತ್ತು ಅನಾರ್ಥೊಸೈಟ್ ಎಂಬ ಶಿಲೆಗಳಲ್ಲಿ ದೊರೆಯುತ್ತದೆ. 2 ಮೆಗ್ನೀಸಿಯಂ ಅಧಿಕವಾಗಿರುವ ಕ್ಷಾರ ಮತ್ತು ಅತಿಕ್ಷಾರ ವರ್ಗಗಳ ಅಗ್ನಿ ಶಿಲೆಗಳಿಗೂ ಪೆಗ್ಮಟೈಟ್, ಗ್ರಾನೈಟ್ ಮುಂತಾದ ಆಮ್ಲಿಕ ಶಿಲೆಗಳಿಗೂ ಸಂಪರ್ಕವಾದೆಡೆಗಳಲ್ಲಿ  ಜನಿಸಿದ ಖನಿಜವಾಗಿ ದೊರೆಯುತ್ತದೆ. 3 ರೂಪಾಂತರ ಹೊಂದಿದ ಅಲ್ಯುಮಿನ ಅಧಿಕವಾಗಿರುವ ಸುಣ್ಣಶಿಲೆಗಳಲ್ಲಿಯೂ ಜನಿಸಿ ಖನಿಜವಾಗಿ ದೊರೆಯುತ್ತದೆ. ಕುರಂದ ಶಿಲೆಗಳ ನಗ್ನೀಕರಣದಿಂದ ಉತ್ಪತ್ತಿಯಾದ ಗರಸಿನಲ್ಲಿ ಸಹ ದೊರೆಯುತ್ತದೆ.

ನಿಕ್ಷೇಪಗಳು : ಭಾರತದಲ್ಲಿ ಕುರಂದ ಅನೇಕ ರಾಜ್ಯಗಳಲ್ಲಿ ಉಂಟು. ಅದರೆ ದೊಡ್ಡ ನಿಕ್ಷೇಪಗಳು ಮುಖ್ಯವಾಗಿ ಅಸ್ಸಾಂ ರಾಜ್ಯದ ಖಾಸಿ ಮತ್ತು ಜಯಂತಿಯಾ ಬೆಟ್ಟದ ಜಿಲ್ಲೆ, ಜಮ್ಮು ಮತ್ತು ಕಾಶ್ಮೀರ್ ರಾಜ್ಯದ ರಿಸ್ತವಾದ ಜಿಲ್ಲೆ. ಮಧ್ಯಪ್ರದೇಶದ ಸಿದಿ ಜಿಲ್ಲೆ ಮತ್ತು ರೀವಾ ಪ್ರದೇಶ, ತಮಿಳುನಾಡಿನ ಕೊಯಮತ್ತೂರು ಮತ್ತು ಸೇಲಂ ಜಿಲ್ಲೆ, ಮಹಾರಾಷ್ಟ್ರದ ಭಂಡಾರಾ ಜಿಲ್ಲೆ ಮತ್ತು ಮೈಸೂರು ರಾಜ್ಯದ ಕೋಲಾರ, ತುಮಕೂರು, ಹಾಸನ, ದಕ್ಷಿಣ ಕನ್ನಡ ಮತ್ತು ಮೈಸೂರು ಜಿಲ್ಲೆಗಳಲ್ಲಿ ಇವೆ. ಆಂಧ್ರ ಪ್ರದೇಶದ ಅನಂತಪುರ ಮತ್ತು ಹೈದರಾಬಾದ್ ಜಿಲ್ಲೆಗಳು, ಬಿಹಾರ್ ರಾಜ್ಯದ ಸಿಂಗ್‍ಭೂಮ್ ಜಿಲ್ಲೆ. ಮತ್ತು ಒರಿಸ್ಸ ರಾಜ್ಯದ ಕಟಕ್ ಜಿಲ್ಲೆಗಳಲ್ಲಿ ಸಹ ಕುರಂದ ಉಂಟೆಂದು ವರದಿಯಾಗಿದೆ. ಅಸ್ಸಾಂ ಮತ್ತು ಮಧ್ಯಪ್ರದೇಶದ ಕುರಂದ ನಿಕ್ಷೇಪಗಳು ಬಹು ಮುಖ್ಯವಾದವು.

ಮೈಸೂರು ರಾಜ್ಯದಲ್ಲಿ ಕುರಂದ ನಿಕ್ಷೇಪಗಳು ಅನೇಕ ಪ್ರದೇಶಗಳಲ್ಲಿ ಹರಡಿರುವುವಾದರೂ ಅವು ಕೆಳಗೆ ವಿವರಿಸಿರುವ ನಿರ್ದಿಷ್ಟ ಪ್ರದೇಶಗಳಲ್ಲಿ ಹಂಚಿರುವಂತೆ ಕಂಡುಬರುತ್ತದೆ. ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಭೈಚಾಪುರದಿಂದ ಉತ್ತರಾಭಿಮುಖವಾಗಿ ಸುಮಾರು 40 ಮೈಲಿ ಉದ್ದವಾದ ಪಾವಗಡದಿಂದ ಕೊಂಚಮುಂದಕ್ಕೆ ಇರುವ ಶಿಲಾಜಾಡಿನಲ್ಲಿ ಬೂದು ಬಣ್ಣದ ಅಥವಾ ಬಿಳಿಬಣ್ಣದ ಕುರಂದ ನಿಕ್ಷೇಪಗಳಿವೆ. ಮಂಡ್ಯ ಜಿಲ್ಲೆಯ ಮಳವಳ್ಳಿಗೆ ಕೊಂಚ ದಕ್ಷಿಣದಿಂದ ಉತ್ತರಾಭಿಮುಖವಾಗಿ ಸುಮಾರು 40 ಮೈಲಿ ಉದ್ದವಿರುವ ತುಮಕೂರು ಜಿಲ್ಲೆಯ ಹುಲಿಯೂರು ದುರ್ಗದಿಂದ ಆಚಿನವರೆಗೂ ಹರಡಿರುವ ವಲಯದಲ್ಲಿ ಕೆಂಪು ಬಣ್ಣದ ಕುರಂದ ನಿಕ್ಷೇಪಗಳಿವೆ. ಮೈಸೂರು ಜಿಲ್ಲೆಯ ತಿರುಮಕೂಡ್ಲು ನರಸೀಪುರದ ತಾಲ್ಲೂಕಿನಲ್ಲಿರುವ ಕುಪ್ಯದಿಂದ ಮಂಡ್ಯದ ಜಿಲ್ಲೆಯ ಮಂಡ್ಯದ ವರೆಗೆ ಉತ್ತರ ದಕ್ಷಿಣವಾಗಿ 20 ಮೈಲಿ ಉದ್ದವಿರುವ ಪ್ರದೇಶಗಳಲ್ಲಿ ಕೆಂಪು ಬಣ್ಣದ ಕುರಂದ ಸಿರುತ್ತದೆ. ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆ ತಾಲ್ಲೂಕಿನಲ್ಲಿರುವ ಸರಗೂರಿನಿಂದ ಉತ್ತರಾಭಿಮುಖವಾಗಿ ಹಾಸನ ಜಿಲ್ಲೆಯ ಅರಸೀಕೆರೆಯ ವರೆಗೆ 90 ಮೈಲಿ ಉದ್ದ 10-12 ಮೈಲಿ ಅಗಲವಿರುವ ಪ್ರದೇಶದಲ್ಲಿ ವಿರಳವಾಗಿ ಹರಡಿರುವ ಬೂದು ಮತ್ತು ಕೆಂಪು ಬಣ್ಣದ ಕುರಂದದ ನಿಕ್ಷೇಪಗಳಿವೆ. ಹಾಸನ ಜಿಲ್ಲೆಯ ಬಾಣಾವರ, ಕಲ್ಯಾಡಿ ಮತ್ತು ಬಾಗೇಶಪುರಗಳಲ್ಲಿ ಬೂದು, ಕೆಂಪು ಮತ್ತು ನೀಲಿವರ್ಣದ ಕುರಂದ ನಿಕ್ಷೇಪಗಳಿವೆ. ಕೋಲಾರ ಜಿಲ್ಲೆಯ ಬಂಗಾರುಪೇಟೆ ತಾಲ್ಲೂಕಿನ ದೊಡ್ಡೇರಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನ ಅಂಗಡಿ ತಾಲ್ಲೂಕಿನ ಕೆಲವು ಪ್ರದೇಶಗಳಲ್ಲಿ ಕುರಂದದ ಸಣ್ಣ ನಿಕ್ಷೇಪಗಳಿವೆ.

ಖನಿಜ ಸಂಸ್ಕರಣ ಮತ್ತು ಉಪಯೋಗ : ಕುರಂದವನ್ನು ಕುಟ್ಟಿ, ಪುಡಿಮಾಡಿ ಅನೇಕ ವರ್ಗದ ಜರಡಿಗಳಲ್ಲಿ ಸೋಸಿ ಗಾತ್ರಾನುಸಾರ ದಪ್ಪ ಮದ್ಯಮವರ್ಗ, ಸಣ್ಣ ಮತ್ತು ಅತಿಸಣ್ಣ ಎಂದು ವಿಂಗಡಿಸಿ ಮಾರುತ್ತಾರೆ ಈ ರೀತಿ ಪುಡಿಮಾಡಿದ ಕುರಂದವನ್ನು ಕುರಂದದ ರತ್ನಗಳನ್ನು ಸಾಣೆಹಿಡಿಯುವುದಕ್ಕೂ ಹೊಳಪು ಕೊಡುವುದಕ್ಕೂ ಉಪಯೋಗಿಸುತ್ತಾರೆ. ಸಾಣೆಕಲ್ಲು, ಅರೆಯುವ ಚಕ್ರ. ಉಪ್ಪುಕಾಗದ ಮತ್ತು ಉಪ್ಪುಬಟ್ಟೆ ಮುಂತಾದುವುಗಳ ತಯಾರಿಕೆಯಲ್ಲಿಯೂ ಕುರಂದದ ದೂಳನ್ನು ಜೇಡಿ ಮಣ್ಣಿನೊಡನೆ ಬೆರೆಸಿ ಮೂಳೆಗಳನ್ನೂ ಉಷ್ಣನಿರೋಧಕ ಇಟ್ಟಿಗೆಗಳನ್ನೂ ತಯಾರಿಸುತ್ತಾರೆ. ಗಾಜು ಮತ್ತು ಇತರ ಪಾರದರ್ಶಕ ಉಪಕರಣಗಳನ್ನು ಸಾಣೆ ಹಿಡಿಯುವಾಗಲೂ ದೂರವನ್ನು ಕಂಡುಹಿಡಿಯಲು ಉಪಯೋಗಿಸುವ ಉಪಕರಣಗಳ ತಯಾರಿಕೆಯಲ್ಲೂ ಕುರಂದವನ್ನು ಬಳಸುತ್ತಾರೆ. ಇದರ ಕಾಠಿಣ್ಯದ ಪ್ರಭಾವದಿಂದ ರತ್ನವರ್ಗಕ್ಕೆ ಸೇರಿದ ಕುರಂದವನ್ನು ಗಡಿಯಾರ ಮತ್ತು ಇತರ ಸೂಕ್ಷಯಂತ್ರಗಳಲ್ಲಿ ತಿರುಗಣೆಯನ್ನು ತಯಾರುಮಾಡಲು ಉಪಯೋಗಿಸುತ್ತಾರೆ. ಇತ್ತೀಚೆಗೆ ಕೃತಕ ಪದಾರ್ಥಗಳ ಉಪಯೋಗ ಹೆಚ್ಚಾಗಿ ಕುರಂದವನ್ನು ಸಾಣೆಹಿಡಿಯುವ ಪದಾರ್ಥಗಳ ತಯಾರಿಕೆಯಲ್ಲಿ ಅಷ್ಟಾಗಿ ಬಳಸುತ್ತಿಲ್ಲ, ವರ್ಣರಂಜಿತವಾದ ಕುರಂದವನ್ನು ಜವಾಹಿರಿಯಲ್ಲಿ ಉಪಯೋಗಿಸುತ್ತಾರೆ.

ಭಾರತದಲ್ಲಿ ಕುರಂದದ ಉತ್ಪತ್ತಿ : ವರ್ಷ ವರ್ಷವೂ ಒಂದೇ ಸಮ ಇರಲಿಲ್ಲ. 1909ರಲ್ಲಿ ಕೇವಲ 40 ಟನ್ ದೊರೆತರೆ 1913ರಲ್ಲಿ 446 ಟನ್ ಸಿಕ್ಕಿತು. ಅಲ್ಲಿಂದ ಮುಂದೆ 5 ವರ್ಷಗಳ ಸರಾಸರಿ ಉತ್ಪತ್ತಿ ವರ್ಷಕ್ಕೆ 1226 ಟನ್‍ಗೆ ಏರಿತು. ಮುಂದೆ ಸುಮಾರು 30 ವರ್ಷ ಕುರಂದ ದೊರೆಯಲೇ ಇಲ್ಲ. ಇತ್ತೀಚೆಗೆ ಭಾರತದಲ್ಲಿ ಕುರಂದದ ಉತ್ಪತ್ತಿ ಮಧ್ಯ ಪ್ರದೇಶದಿಂದ ಮಾತ್ರ. 1964ರಲ್ಲಿ 3,03,000 ರೂಪಾಯಿ ಬಾಳುವ 540 ಟನ್ ಮತ್ತು 1965ರಲ್ಲಿ 2,11,000 ರೂಪಾಯಿ ಬಾಳುವ 481 ಟನ್ ಕುರಂದ ಭಾರತದಲ್ಲಿ ದೊರೆತಿದೆ.

 

 (ಎಂ.ಎಸ್.ಎಸ್.; ಎಂ.ಎ.ಎಸ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ